ಈ ಕೋರ್ಸ್ ಒಳಗೊಂಡಿದೆ
ಭಾರತ ಸೀಬೆ ಹಣ್ಣನ್ನು ಹೇರಳವಾಗಿ ಬೆಳೆಯುತ್ತದೆ. ಸೀಬೆ ಹಣ್ಣನ್ನು ತಿನ್ನದವರು ನಿಮಗೆ ಭಾರತದಲ್ಲಿ ಸಿಗುವುದು ಕಷ್ಟ. ಯಾಕೆಂದರೆ ಈ ಸೀಬೆ ಹಣ್ಣು ಕಡಿಮೆ ಬೆಲೆಗೆ ಸಿಗುವುದರಿಂದ ಇದನ್ನು ಎಲ್ಲ ವರ್ಗದ ಜನರೂ ಸಹ ಸೇವಿಸುತ್ತಾರೆ. 2019ರಲ್ಲಿ ಇಡೀ ವಿಶ್ವದಲ್ಲಿ ಒಟ್ಟು 55 ಮಿಲಿಯನ್ ಟನ್ ಪೇರಲವನ್ನು ಬೆಳೆಯಲಾಗಿತ್ತು. ಭಾರತದಲ್ಲೇ ಸುಮಾರು ಇದರ ಅರ್ಧದಷ್ಟು ಅಂದರೆ 24.75 ಮಿಲಿಯನ್ ನಷ್ಟು ಸೀಬೆ ಹಣ್ಣನ್ನು ಬೆಳೆಯಲಾಗಿತ್ತು. ಆದರೆ ಭಾರತದಿಂದ ರಫ್ತು ಆಗುತ್ತಿರುವುದು ಕೇವಲ 0.05 ಪರ್ಸೆಂಟ್ ನಷ್ಟು ಪೇರಲ ಹಣ್ಣು ಮಾತ್ರ.
ನಮ್ಮಲ್ಲಿ ಬೆಳೆಯುವ ಸೀಬೆ ಹಣ್ಣುಗಳು ರಫ್ತು ಮಾಡಲು ಅಗತ್ಯವಿರುವ ಮಾನದಂಡವನ್ನು ಪೂರೈಸದ ಕಾರಣ ಇವುಗಳ ರಫ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಹೇಳಬಹುದು. ಸೀಬೆ ಹಣ್ಣುಗಳ ರಫ್ತನ್ನು ಹೆಚ್ಚಿಸಲು ಇವುಗಳನ್ನು ಕಮರ್ಷಿಯಲ್ ದೃಷ್ಟಿಯಲ್ಲಿ ನೋಡುವುದು ಅವಶ್ಯಕವಾಗಿದೆ. ಈ ಮೂಲಕ ಉತ್ತಮ ಆದಾಯವನ್ನು ಗಳಿಸಲು ಸಹ ಸಾಧ್ಯವಾಗುತ್ತದೆ.
ಆರೋಗ್ಯದ ದೃಷ್ಟಿಯಿಂದಲೂ ಸಹ ಈ ಹಣ್ಣುಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಸೀಬೆಹಣ್ಣಿನಲ್ಲಿ ಪೋಷಕಾಂಶಗಳು, ವಿಟಮಿನ್ ಗಳು ಹೆಚ್ಚಿಗೆ ಪ್ರಮಾಣದಲ್ಲಿದೆ. ಈ ಕಾರಣಕ್ಕೆ ಇವುಗಳಿಗೆ ಉತ್ತಮ ಬೇಡಿಕೆ ಇದೆ. ತೈವಾನ್ ಸೀಬೆ ಹಣ್ಣು ಕೂಡ ಈ ಎಲ್ಲ ಅಂಶಗಳನ್ನು ಒಳಗೊಂಡಿದೆ. ಇದರ ಜೊತೆಗೆ ತೈವಾನ್ ಸೀಬೆ ಅದರ ಗಾತ್ರದ ಮೂಲಕ ಎಲ್ಲರನ್ನು ಆಕರ್ಷಿಸುತ್ತದೆ. ಈ ತೈವಾನ್ ಸೀಬೆ ಹಣ್ಣು ಸುಮಾರು 200ಗ್ರಾಂ ನಿಂದ 300ಗ್ರಾಂ ವರೆಗೆ ತೂಗುತ್ತದೆ. ಈ ಕೋರ್ಸ್ ನಲ್ಲಿ ತೈವಾನ್ ಸೀಬೆ ಹಣ್ಣಿನ ಕೃಷಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತೀರಿ.