ಈ ಕೋರ್ಸ್ ಒಳಗೊಂಡಿದೆ
ನಿಮಗೆ ಗಿಡಗಳ ಬಗ್ಗೆ ಅಪಾರವಾದ ಪ್ರೀತಿ ಇದ್ದರೆ, ಅವುಗಳನ್ನು ಮಗುವಿನಂತೆ ಪೋಷಣೆ ಮಾಡಲು ನಿಮಗೆ ಇಷ್ಟವಿದ್ದರೆ ನಿಮಗೆ ಈ ಟೆರೇಸ್ ಗಾರ್ಡನ್ ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ನಿಮ್ಮ ಮನೆಯ ಟೆರೇಸ್ ನ ಮೇಲೆ ಜಾಗವಿದ್ದರೆ, ಅದರಲ್ಲಿ ನೀವು ಹೂವು, ಹಣ್ಣು, ತರಕಾರಿಗಳನ್ನು ಬೆಳೆಯುವುದಕ್ಕೆ ಟೆರೇಸ್ ಗಾರ್ಡನಿಂಗ್ ಎಂದು ಕರೆಯುತ್ತಾರೆ.
ನಗರವಾಸಿಗಳಂತೂ ಇಂದು ಕಾಂಕ್ರೀಟ್ ಕಾಡಿನಲ್ಲಿ ಬದುಕುತ್ತಿದ್ದಾರೆ. ಎಲ್ಲಿ ನೋಡಿದರು ಬರೀ ಕಟ್ಟಡಗಳೇ ಅವರಿಗೆ ಕಾಣಸಿಗುತ್ತವೆ. ಇಂತಹ ಕಡೆ ಒಳ್ಳೆಯ ಗಾಳಿ ಸಿಗುವುದೂ ಸಹ ಕಷ್ಟವೇ. ಹಾಗಾಗಿ ತಾರಸೀ ತೋಟವನ್ನು ಮಾಡಿದರೆ ಪ್ರಕೃತಿಯಿಂದ ನಾವು ದೂರಾಗುತ್ತಿದ್ದೇವೆ ಎಂಬುವ ಕಲ್ಪನೆಯನ್ನು ದೂರಾಗಿಸಲು ಒಂದು ಸಣ್ಣ ಪ್ರಯತ್ನ ಅಂತ ಹೇಳಬಹುದು.
ಗಿಡಗಳನ್ನು ಬೆಳೆಸುವ ಹವ್ಯಾಸವನ್ನು ಶುರು ಮಾಡಿದರೆ ಅದೊಂದು ರೀತಿ ಮಕ್ಕಳನ್ನು ಸಲಹಿದಂತೆಯೇ ಭಾಸವಾಗಲು ಶುರುವಾಗುತ್ತದೆ. ಬೆಂಗಳೂರಿನಲ್ಲಿ ಸುಮಾರು 50 ಸಾವಿರ ತಾರಸಿ ತೋಟಗಳಿವೆ ಎಂದು ಅಂದಾಜಿಸಲಾಗಿದೆ. 1995 ರಲ್ಲಿ ತಾರಸಿ ತೋಟವನ್ನು ಬೆಳೆಸುವುದು ಒಂದು ಅಭಿಯಾನವಾಗಿ ಶುರುವಾಯಿತು. ನಿಮ್ಮ ಜಾಗ ಸ್ವಲ್ಪ ವಿಶಾಲವಾಗಿದ್ದರೆ ಈ ಟೆರೇಸ್ ಗಾರ್ಡನ್ ಅನ್ನು ನೀವು ವಾಣಿಜ್ಯ ದೃಷ್ಟಿಯಿಂದಲೂ ಸಹ ಪ್ರಾರಂಭಿಸಬಹುದು.
ಕೆಲವರು ಈ ರೀತಿ ವಾಣಿಜ್ಯ ಉದ್ದೇಶದಿಂದ ಬೆಳೆದು 30 ರಿಂದ 50 ಸಾವಿರದ ವೆರೆಗೂ ಸಹ ಆದಾಯವನ್ನು ಗಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಗಾನಿಕ್ ಪದಾರ್ಥಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಇದನ್ನು ಉತ್ತಮವಾದ ಬಿಸಿನೆಸ್ ಆಗಿ ಸಹ ಪರಿಗಣಿಸಬಹುದು.